ಚೋದನೆಗಳು

ಒಂದು ವ್ಯಕ್ತಿಯಲ್ಲಿ ಕಂಡುಬರುವ ಅಭಿಪ್ರೇರಿತ ವರ್ತನೆಯಲ್ಲಿ (ಮೋಟಿವೇಟೆಡ್ ಬಿಹೇವಿಯರ್) ಸಾಮಾನ್ಯವಾಗಿ ಕಂಡುಬರುವ ಮೂರು ಅಂಶಗಳಲ್ಲೊಂದು (ಡ್ರೈವ್ಸ್). ಉಳಿದೆರಡು ಅಂಶಗಳೆಂದರೆ ಗುರಿ ಅಥವಾ ಪರಿಹಾರದ ಮುನ್ನರಿವು (ಫೋರ್ ಸೈಟ್) ಮತ್ತು ಗುರಿಯ ಸಾಧನ ಮತ್ತು ಪ್ರಯತ್ನಗಳು. ಶಾರೀರಿಕ ಅಗತ್ಯದಿಂದ ಉಂಟಾದ ಚೋದನೆ ಜೀವಿಯನ್ನು ಕಾರ್ಯೋನ್ಮುಖಗೊಳಿಸುತ್ತದೆ. ಉದಾ: ಆಹಾರದ ಅಗತ್ಯ ಬಿದ್ದಾಗ ಉಂಟಾಗುವ ಚೋದನೆ (ಹಸಿವು) ಜೀವಿಯನ್ನು ಆಹಾರನ್ವೇಷಣೆಗೆ ಮುಂದೂಡುತ್ತದೆ. ಹೀಗೆ, ಅಗತ್ಯಬಿದ್ದಾಗ ಜೀವಿಯನ್ನು ಕಾರ್ಯೋನ್ಮುಖಗೊಳಿಸುವ ಆಂತರಿಕ ಅಭಿಪ್ರೇರಣೆಗಳೇ ಚೋದನೆಗಳು. 

ಚಿತ್ರ-1

ಶಾರೀರಕ ಚೋದನೆಗಳು ಮತ್ತು ಆರ್ಜಿತ ಅಭಿಪ್ರೇರಣೆಗಳು ಎಂಬ ಎರಡು ವರ್ಗಗಳಲ್ಲೂ ಚೋದನೆಗಳು ಅಡಕವಾಗುತ್ತವೆ. ಶಾರೀರಿಕ ಚೋದನೆಗಳಿಗೂ ಸಮತೋಲಸ್ಥಿತಿಗೂ ನಿಕಟಸಂಬಂಧವಿದೆ. ಜೀವಿಯಲ್ಲಿ ಸದಾಕಾಲ ನಡೆಯುತ್ತಿರುವ ಚಯಾಪಚಯ ಕ್ರಿಯೆಯಿಂದಾಗಿ ಶರೀರಕ್ಕೆ ಬೇಕಾಗುವ ಯಾವುದೋ ರಚನಾಂಶದ (ಉದಾ: ಆಹಾರ, ನೀರು, ವಿರಾಮ ಇತ್ಯಾದಿ) ಕೊರತೆಯಿಂದಾಗಿ ಸಂಬಂಧಪಟ್ಟ ಶರೀರಕ್ರಿಯೆಗಳಲ್ಲಿ ಏರುಪೇರುಗಳುಂಟಾಗುತ್ತವೆ. ಈ ರೀತಿ ಉಂಟಾದ ಏರುಪೇರುಗಳನ್ನು ಸರಿಪಡಿಸಲು, ಅಂದರೆ ಶರೀರದಲ್ಲಿ ಉಂಟಾಗುವ ಅಗತ್ಯವನ್ನು ಪೂರೈಸಿಕೊಳ್ಳಲು ಕಾರ್ಯೋನ್ಮುಖವಾಗಲು ಜೀವಿ ಚೋದಿತವಾಗುತ್ತದೆ. ಹೀಗೆ ಚೋದಿಸಲ್ಪಟ್ಟ ಜೀವ ಸಮರ್ಪಕ ಸಾಧನದ ನೆರವಿನಿಂದ ಸೂಕ್ತ ಗುರಿಯನ್ನು ತಲುಪಿದಾಗ ಉಂಟಾಗಿದ್ದ ಕೊರತೆ ನೀತಿ ಸಮತೋಲ ಸ್ಥಿತಿ ಸ್ಥಾಪಿತವಾಗುತ್ತದೆ. ಹೀಗೆ ಸ್ಥಾಪಿತವಾದ ಸ್ಥಿತಿ ತಾತ್ಕಾಲಿಕವಾಗಿದ್ದು, ಚಯಾಪಚಯಕ್ರಿಯೆಗೆ ಅನುಗುಣವಾಗಿ ಸಮತೋಲ-ಅಸಮತೋಲ ಸ್ಥಿತಿ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ.

	ಶಾರೀರಿಕ ಚೋದನೆಗಳಲ್ಲಿ ಮುಖ್ಯವಾದವುಗಳೆಂದರೆ, ಉಸಿರು, ನೀರಡಿಕೆ, ಹಸಿವು, ತಾಯ್ತನದ ಚೋದನೆ, ಮೈಥುನ, ನಿದ್ರೆ ಮತ್ತು ಉಷ್ಣತಾ ಚೋದನೆ. ಇವು ಅನುವಂಶೀಯವಾದವುಗಳೆಂಬುದು ಸಿದ್ಧವಾಗಿದೆ. ಹೇಗೆಂದರೆ ಅವು ಅನುವಂಶೀಯವೆಂಬುದಕ್ಕೆ ಮೂರು ಪ್ರಮಾಣಗಳನ್ನು ಕೊಡಲಾಗಿದೆ; 1 ಸರ್ವವ್ಯಾಪಕತೆ (ಯೂನಿವಸ್ರ್ಯಾಲಿಟಿ) ಅಂದರೆ ಒಂದು ಪ್ರಭೇದದ ಎಲ್ಲ ಜೀವಿಗಳಲ್ಲಿಯೂ ಕಂಡುಬರುವುದು; 2 ವೈಕಾಸಿಕ ತಳಹದಿ. ಸಾಮಾನ್ಯವಾಗಿ ಜೀವವಿಕಾಸ ಶ್ರೇಣಿಯ ವಿವಿಧ ಹಂತಗಳಲ್ಲಿ ಕಂಡುಬರುವ ಗುಣ; 3. ಶಾರೀರಿಕ ಬದಲಾವಣೆ, ಚೋದನೆಗೆ ಸಂಬಂಧಿಸಿದ ಯಾವುದೋ ವಿಶಿಷ್ಟ ಶಾರೀರಿಕ ಕ್ರಿಯೆ. ಉದಾ: ಹಸಿವು. ಈ ಚೋದನೆ ಒಂದು ಪ್ರಭೇದಕ್ಕೆ ಸೇರಿರುವ ಎಲ್ಲ ಜೀವಿಗಳಲ್ಲಿಯೂ ವಿಕಾಸಶ್ರೇಣಿಯ ವಿವಿಧ ವರ್ಗದ ಜೀವಿಗಳಲ್ಲಿಯೂ ಕಂಡುಬರುವುದಲ್ಲದೆ, ಹಸಿವಾದಾಗ ಕೆಲವು ವಿಶಿಷ್ಟ ಶಾರೀರಿಕ ಬದಲಾವಣೆಗಳು ನಡೆಯುತ್ತವೆ. ಈ ಕಾರಣಗಳಿಂದ ಹಸಿವು ವ್ಯಕ್ತಿಗೆ ಅನುವಂಶೀಯವಾಗಿ ಬಂದ ಚೋದನೆ ಎಂಬುದು ಸಿದ್ಧವಾಗುತ್ತದೆ. ಇತರ ಚೋದನೆಗಳನ್ನೂ ಇದೇ ರೀತಿ ವಿಶ್ಲೇಷಿಸುವುದರಿಂದ ಅವುಗಳ ಅನುವಂಶೀಯತೆ ಪ್ರಕಟವಾಗುತ್ತದೆ. ಆದರೆ, ಈ ಚೋದನೆಗಳು ಅನುವಂಶೀಯವಾದಾಗ್ಯೂ ವ್ಯಕ್ತಿ ಪ್ರತ್ಯಾವರಣದೊಂದಿಗೆ ವ್ಯವಹರಿಸುವಾಗ, ಅವುಗಳ ಅಭಿವ್ಯಕ್ತಿಯಲ್ಲಿ ಗಣನೀಯ ಮಾರ್ಪಾಡುಗಳಾಗುತ್ತವೆ.

ಚಿತ್ರ-2

ಅರಿಯುವ ಆಶಯದಿಂದ ಚೋದನೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಿದರೂ ಅವುಗಳಲ್ಲಿ ಪರಸ್ಪರ ಸಾಹಚರ್ಯ ಇರುತ್ತದೆ. ಏಕಕಾಲದಲ್ಲಿ ಎರಡು ಅಥವಾ ಹೆಚ್ಚು ಚೋದನೆಗಳು ಕೆಲಸ ಮಾಡುವ ಸಾಧ್ಯತೆ ಇದೆ. 

	ಚೋದನೆಗಳು ತಮ್ಮ ಬಲದಲ್ಲಿ ಸಾಪೇಕ್ಷವಾಗಿ ವ್ಯತ್ಯಾಸಹೊಂದಿರುತ್ತವೆ. ತಾಯ್ತನದ ಮತ್ತು ಮೈಥುನದ ಚೋದನೆಗಳು ಪ್ರಭೇದದ ಇರುವಿಕೆಗೆ ಅತ್ಯಾವಶ್ಯಕವೆನಿಸಿದರೆ, ಉಳಿದ ಎಲ್ಲ ಚೋದನೆಗಳೂ ವ್ಯಕ್ತಿಯ ಇರುವಿಕೆಗೆ ಅತ್ಯವಶ್ಯ. ಹೀಗಿದ್ದರೂ ಬಲದ ದೃಷ್ಟಿಯಿಂದ ಇವುಗಳಲ್ಲಿಯೇ ಸಾಪೇಕ್ಷವಾಗಿ ಭೇದವಿರುವುದು ಪ್ರಾಯೋಗಿಕ ಅಧ್ಯಯನಗಳಿಂದ ವ್ಯಕ್ತವಾಗಿದೆ. ಚೋದನೆಗಳ ಸಾಪೇಕ್ಷಬಲವನ್ನು ತಿಳಿಯಲು ಉಪಯೋಗಿಸುವ ಪ್ರಯೋಗಸಾಧನಗಳಲ್ಲಿ ಬಹು ಮುಖ್ಯವಾದವುಗಳೆಂದರೆ ಪ್ರತಿಬಂಧಕ ಪೆಟ್ಟಿಗೆ ಮತ್ತು ಚಟುವಟಿಕೆ ಪಂಜರ. ಜೀವಿಯ ವಿವಿಧ ಚೋದನೆಗಳ ಬಗ್ಗೆ ವಾರ್ಡನ್ ಮತ್ತು ಆತನ ಸಂಗಡಿಗರು ಮಾಡಿದ ಪ್ರಯೋಗದಲ್ಲಿ ಕೆಳಗೆ ಕಾಣಿಸಿದ ಫಲಿತಾಂಶಗಳು ಹೊರಬಿದ್ದವು.

ಪರೀಕ್ಷಿಸಲಾದ ಚೋದನೆಗಳು
20 ನಿಮಿಷಗಳ ಅವಧಿಯಲ್ಲಿ ಪ್ರತಿಬಂಧಕವನ್ನು
ಎಷ್ಟು ಸಲ ದಾಟಲಾಯಿತು (ಸರಾಸರಿ)

ತಾಯ್ತನದ ಚೋದನೆ
ನೀರಡಿಕೆ
ಹಸಿವು
ಮೈಥುನ
ಅನ್ವೇಷಣೆ
ಪರಿಹಾರವನ್ನು ಕೊಡದಿದ್ದಾಗ

22.4
20.4
18.2
13.8
6.0
3.5

	
ತಾಯ್ತನದ ಚೋದನೆ ಮತ್ತು ನೀರಡಿಕೆಗಳನ್ನು ಬಿಟ್ಟರೆ ಹಸಿವೇ ಅತ್ಯಂತ ಹೆಚ್ಚು ಪ್ರಬಲವಾದ ಅಭಿಪ್ರೇರಣೆ ಎಂಬುದು ಮೇಲಿನ ಅಂಕಿ ಅಂಶಗಳಿಂದ ಸಿದ್ಧವಾಗುತ್ತದೆ. ಅಲ್ಲದೆ ಮೈಥುನದ ಹಂಬಲವೂ ಇತರ ಕೆಲವು ಚೋದನೆಗಳಷ್ಟು ಪ್ರಬಲವಾದುದಲ್ಲ ಎಂಬುದೂ ಇಲ್ಲಿ ಸ್ಪಷ್ಟ.

	ಶಾರೀರಿಕ ಚೋದನೆಗಳು ಇತರ ಅಭಿಪ್ರೇರಣೆಗಳೊಡನೆಯೂ ಸಂಬಂಧ ಹೊಂದಿವೆ. ಶಾರೀರಿಕ ಚೋದನೆಗಳೊಂದಿಗೆ ವೈಯಕ್ತಿಕ ಮತ್ತು ಸಾಮಾಜಿಕ ಅಭಿಪ್ರೇರಣೆಗಳು ಹಾಗೂ ಸಂವೇಗಗಳೂ (ಇಮೋಷನ್ಸ್) ಸೇರಿದಾಗ, ಅಭಿಪ್ರೇರಣೆಗಳು ಹಾಗೂ ಒಂದು ಜಟಿಲ ಜಾಲವೇ ವೈವಿಧ್ಯಪೂರ್ಣವಾದ ವ್ಯಕ್ತಿ-ವರ್ತನೆಯನ್ನು ನಿರ್ದೇಶಿಸುತ್ತದೆ. ಇಲ್ಲಿಯೂ ಯಾವ ಅಭಿಪ್ರೇರಣೆಗಳು ಸಾಪೇಕ್ಷವಾಗಿ ಹೆಚ್ಚು ಬಲಯುತವಾಗಿರುತ್ತವೆ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಖಚಿತವಾಗಿ ಉತ್ತರ ಹೇಳಲು ಸಾಧ್ಯವಿಲ್ಲದಿದ್ದರೂ ಮಾಸ್ಲೋ ಎಂಬ ಮನೋವಿಜ್ಞಾನಿ ಅಭಿಪ್ರೇರಣೆಗಳ ಶ್ರೇಣಿ ಎಂಬ ಕಲ್ಪಿತಾಭಾವವನ್ನು ಮುಂದಿಟ್ಟಿದ್ದಾನೆ. ಈ ಶ್ರೇಣಿ ಒಂದು ರೀತಿಯಲ್ಲಿ ವ್ಯಕ್ತಿತ್ವದ ಬೆಳೆವಣಿಗೆಯ ದಿಸೆಯನ್ನು ನಿರ್ದೇಶಿಸುತ್ತದೆ ಎಂದು ಹೇಳಬಹುದು.

ಚಿತ್ರ-3

	ಶ್ರೇಣಿಯ ಬುಡದಲ್ಲಿ ಕಾಣಿಸಲಾಗಿರುವ ಹಸಿವು ನೀರಡಿಕೆಯಂಥ ಮೂಲ ಅಗತ್ಯಗಳು ಸಾಕಷ್ಟು ಪೂರ್ಣಗೊಳ್ಳುವವರೆಗೆ ವ್ಯಕ್ತಿಯ ವರ್ತನೆಯನ್ನು ಬಹುಮಟ್ಟಿಗೆ ತಮ್ಮ ಅಂಕೆಯಲ್ಲಿಟ್ಟುಕೊಳ್ಳುತ್ತವೆ (ಉದಾ: ಬಡತನದ ಬೇಗೆಯಲ್ಲಿ ಬೇಯುತ್ತಿರುವವರ ಚಟುವಟಿಕೆಗಳು, ಆಸೆ ಆಕಾಂಕ್ಷೆಗಳು ಬಹುಮಟ್ಟಿಗೆ ಆಹಾರಾನ್ವೇಷಣೆಗೆ ಸಂಬಂಧಿಸಿರುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಆದರೆ ಈ ಮೂಲ ಅಗತ್ಯಗಳು ಸಾಪೇಕ್ಷವಾಗಿ ಪೂರ್ಣಗೊಂಡ ಅನಂತರ, ವ್ಯಕ್ತಿ ಮೇಲು ಮೇಲಿನ ಅಗತ್ಯಗಳ ಪೂರೈಕೆಯಲ್ಲಿ ತನ್ನ ಶಕ್ತಿಸಾಮಾಥ್ರ್ಯಗಳನ್ನು ತೊಡಗಿಸುತ್ತಾನೆ. ಈ ದೃಷ್ಟಿಯಿಂದ ನೋಡಿದಾಗ, ಒಬ್ಬ ವ್ಯಕ್ತಿಯ ಅಥವಾ ಒಂದು ಸಂಸ್ಕøತಿಯ ಉನ್ನತಿ ಹಾಗೂ ಅವನತಿಗಳು ಅಭಿಪ್ರೇರಣಾಶ್ರೇಣಿಯ ವಿವಿಧ ಹಂತಗಳಲ್ಲಿರುವ ಅಗತ್ಯಗಳ ತೃಪ್ತಿ ಎಷ್ಟರಮಟ್ಟಿಗೆ ಆಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಉದಾ: ಅಹಂ ವಾಸ್ತವೀಕರಣದಂಥ ಅತ್ಯುನ್ನತ ಅಗತ್ಯದ ಪೂರೈಕೆಗೆ ಪ್ರಯತ್ನ ನಡೆಯಬೇಕಾದರೆ, ಸಾಮಾನ್ಯವಾಗಿ ಕೆಳಕೆಳಗಿನ ಅಗತ್ಯಗಳೂ ಸಾಪೇಕ್ಷವಾಗಿ ಪರಿಪೂರ್ಣ ಹೊಂದಿರಬೇಕು. ಮೂಲ ಅಗತ್ಯಗಳನ್ನು ಪೂರ್ಣಗೊಳಿಸಲು ವಿಫಲವಾಗಿ, ಕೇವಲ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸುವಂತೆ ಜನತೆಗೆ ಕರೆನೀಡುವ ನಮ್ಮ ಧುರೀಣರುಗಳಿಗೆ ಈ ತಥ್ಯಾಂಶ ವೇದ್ಯವಾಗುವುದಾದರೆ ಅನುಕೂಲವಾಗಬಹುದು.

	ಒಟ್ಟಿನಲ್ಲಿ ಶಾರೀರಿಕ ಚೋದನೆಗಳು ಮೂಲ ಅಭಿಪ್ರೇರಣೆಗಳಾಗಿದ್ದು ಅಗತ್ಯಬಿದ್ದಾಗ ವ್ಯಕ್ತಿಯನ್ನು ಕಾರ್ಯೋನ್ಮುಖನನ್ನಾಗಿ ಮಾಡುತ್ತವೆ. ವ್ಯಕ್ತಿಯಲ್ಲ ಸಹಜವಾಗಿರುವ ಈ ಚೋದನೆಗಳು ಬಲದ ದೃಷ್ಟಿಯಿಂದ ತಮ್ಮಲ್ಲಿಯೇ ಸಾಪೇಕ್ಷವಾಗಿ ವ್ಯತ್ಯಾಸ ಹೊಂದುತ್ತವೆ. ಆದರೂ ಅವುಗಳಲ್ಲಿ ಸಾಹಚರ್ಯವನ್ನು ಕಾಣಬಹುದು. ಮೂಲತಃ ಈ ಚೋದನೆಗಳು ವ್ಯಕ್ತಿಯ ವರ್ತನೆಯನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳುವುದಾದರೂ ಅವು ಸಾಪೇಕ್ಷವಾಗಿ ತೃಪ್ತಿ ಹೊಂದಿದ ಮೇಲೆ ಮೇಲ್ಮಟ್ಟದ ಅಭಿಪ್ರೇರಣೆಗಳು, ಹೆಚ್ಚು ಹೆಚ್ಚಾಗಿ ವ್ಯಕ್ತಿಯ ಆಲೋಚನೆಗಳು, ಮಾತು ಮತ್ತು ಕೃತಿಗಳನ್ನು ನಿರ್ದೇಶಿಸತೊಡಗುತ್ತವೆ. ಆದ್ದರಿಂದ ವ್ಯಕ್ತಿಯ ಅಥವಾ ಸಂಸ್ಕøತಿಯ ವಿಕಾಸದ ದೃಷ್ಟಿಯಿಂದ ಈ ಮೂಲ ಅಭಿಪ್ರೇರಣೆಗಳ ಸಂತೃಪ್ತಿ ಅತ್ಯಗತ್ಯ.				(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ